ಹಬ್ಬಗಳ ಸಾಲಿಗೆ ನಾಂದಿ ಹಾಡುವ ಪಂಚಮಿ.

By Someshwar R Gurumath, Rashtram Learner

ಆಷಾಢ ಮುಗಿದು ಶ್ರಾವಣ ಬರುತ್ತಿದ್ದಂತೆ ಹಬ್ಬಗಳ ಸಾಲು ಕಳೆಗಟ್ಟಿದ ಮುತ್ತಿನ ತೋರಣದಂತೆ ಸಜ್ಜುಗೊಂಡು ನವ ಋತುಮಾನದ ಸ್ವಾಗತಕ್ಕೆ ಕಾದು ಕುಳಿತಂತೆ ತೋರುತ್ತದೆ. ಪ್ರತಿವರ್ಷವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನವನ್ನು “ನಾಗರ ಪಂಚಮಿ” ಎಂದು  ಆಚರಿಸುತ್ತೇವೆ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯಿಂದ  ಆರಂಭವಾಗೊಳ್ಳುವ ತೋರಣವು   ನಂತರದಲ್ಲಿ ಸಾಲಾಗಿ  ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ವೀರಭದ್ರ ಜಯಂತಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ. ನಾಗರ ಪಂಚಮಿಯು ಭಾರತದ ಹಲವು ಭಾಗಗಳಲ್ಲಿ ಆಚರಿಸಲ್ಪಡುವುದುದಾದರೂ ಕರ್ನಾಟಕದಲ್ಲಿ ಈ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಇಂದು ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವರನ್ನು ಬೇಡುವುದು ವಾಡಿಕೆ.

ವಿಶೇಷ ಪೌರಾಣಿಕ ಹಿನ್ನಲೆಗಳು – ೧. ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು – ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ.

ಈ ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದ್ದವನು ಬಾಯಾರಿ ಶಮೀಕಮುನಿಯ ಆಶ್ರಮವನ್ನು ಹೊಕ್ಕ. ಸಮಾಧಿಸ್ಥನಾಗಿದ್ದ ಮುನಿ ಈತನನ್ನು ಸತ್ಕರಿಸಲಿಲ್ಲವಾದ ಕಾರಣ ಕೋಪಗೊಂಡು ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋದ. ನಂತರ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ ಕ್ರೋಧವಶನಾಗಿ “ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇನ್ನು ಏಳು ದಿನಗಳೊಳಗೆ ಸರ್ಪದ ಕಡಿತದಿಂದ ಸಾಯಲಿ” ಎಂದು ಶಪಿಸಿದ. ಈ ಶಾಪವನ್ನು ಸ್ವೀಕರಿಸಿದ ಪರೀಕ್ಷಿತ, ತನ್ನ ಅಂತಿಮ ದಿನಗಳನ್ನು ಭಾಗವತ ಶ್ರವಣದಲ್ಲಿ ಕಳೆದು, ಸರ್ಪರಾಜ ತಕ್ಷಕನ ಕಡಿತಕ್ಕೆ ಒಳಗಾಗಿ ತೀರಿಹೋದ.

ಪರೀಕ್ಷಿತನ ನಂತರ ಅವನ ಮಗ ಜನಮೇಜಯ ಅಧಿಕಾರಕ್ಕೆ ಬಂದ. ತಂದೆಯನ್ನು ಉಳಿಸಿಕೊಳ್ಳಲು ರಹಸ್ಯ ಭವನ ನಿರ್ಮಿಸಿ ಎಷ್ಟೆಲ್ಲ ಕಷ್ಟಪಟ್ಟಿದ್ದರೂ ತಕ್ಷಕ ಅದನ್ನು ಪ್ರವೇಶಿಸಿ ಕಚ್ಚಿ ಸಾಯಿಸಿದ್ದು ಅವನಿಗೆ ಮರೆಯಲಾಗಿರಲಿಲ್ಲ. ಅದಕ್ಕೆ ಸರಿಯಾಗಿ, ಸರ್ಪಗಳ ಮೇಲೆ ದ್ವೇಷವಿದ್ದ ಉತ್ಥಂಕ ಜನಮೇಜಯನನ್ನು ಭೇಟಿಯಾಗಿ ಅವನನ್ನು ಸೇಡಿಗಾಗಿ ಪ್ರಚೋದಿಸಿದ. “ಸರ್ಪಯಾಗ ನಡೆಸಿ ನಿನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡು” ಎಂದು ಹುರಿದುಂಬಿಸಿದ.

ಅದರಂತೆ ಜನಮೇಜಯ ಆಸ್ಥಾನ ಪುರೋಹಿತರನ್ನು ಕರೆಸಿ ಸರ್ಪಯಾಗಕ್ಕೆ ದಿನ ನಿಶ್ಚಯಿಸಿದ. ಋತ್ವಿಜರನ್ನು ಕರೆಸಿ ಬೇಕಾದ ಏರ್ಪಾಡು ಮಾಡಿಕೊಳ್ಳಲು ಸೂಚಿಸಿದ.

ಸರ್ಪ ಯಾಗ ಶುರುವಾಯಿತು. ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡಿ, ಅದನ್ನು ಅಗ್ನಿಯ ಬಳಿಗೆ ಆಕರ್ಷಿಸಿ ‘ಸ್ವಾಹಾ’ ಅನ್ನುತ್ತಿದ್ದರು. ಕೂಡಲೇ ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು. ಎಲ್ಲ ಲೋಕಗಳ, ಎಲ್ಲ ಬಗೆಯ ಹಾವುಗಳೂ ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರೂ ತಲ್ಲಣಿಸಬೇಕು! ಆದರೆ ಜನಮೇಜಯ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದ. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ನಿಯತಿಯ ಇಚ್ಛೆಯಾಗಿತ್ತು. ಜನಮೇಜಯ ನಿಮಿತ್ತ ಮಾತ್ರನಾಗಿದ್ದ. ಸರ್ಪಕುಲದ ತಾಯಿ ಕದ್ರು ನೀಡಿದ ಶಾಪವೇ ಸರ್ಪಯಾಗಕ್ಕೆ ವೇದಿಕೆ ಒದಗಿಸಿತ್ತು. 

ಜನಮೇಜಯನ ಯಜ್ಞಕ್ಕೆ ತನ್ನ ಬಾಂಧವರು ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ತಲ್ಲಣಿಸಿಹೋದ. ಸಹಾಯಕ್ಕಾಘಿ ದೇವೇಂದ್ರನ ಬಳಿ ಧಾವಿಸಿದ. ತಕ್ಷಕನಿಗೆ ಅಭಯ ನೀಡಿದ ದೇವೇಂದ್ರ, “ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು, ಯಾಗ ಮಂತ್ರ ನಿನ್ನನ್ನು ಸೆಳೆಯಲಾರದು” ಎಂದು ಸೂಚಿಸಿದ. ತಕ್ಷಕ ಹಾಗೇ ಮಾಡಿದ.

ಆದರೆ ಯಾಗ ಮಂತ್ರದ ಆಕರ್ಷಣೆಯ ಬಲದೆದುರು ತಕ್ಷಕನ ಆಟ ನಡೆಯಲಿಲ್ಲ. ಮಂತ್ರವು ದೇವೇಂದ್ರನನ್ನೂ ಸೇರಿಸಿಕೊಂಡೇ ತಕ್ಷಕನನ್ನು ಯಾಗಕುಂಡದೆಡೆ ಸೆಳೆಯಲಾರಂಭಿಸಿತು.

ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ಹೊರಗಿನವನಾದ, ಸೋದರಳಿಯ ಆಸ್ತಿಕ ಋಷಿಯ ಬಳಿ ಹೋದರು. “ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡರು. ಆಸ್ತಿಕ ಸಂತೋಷದಿಂದಲೇ ಸಮ್ಮತಿಸಿ, “ಹೇಳಿ, ನಾನೇನು ಮಾಡಿದರೆ ಸರ್ಪ ಸಂತತಿ ಉಳಿಯುತ್ತದೆ?” ಎಂದು ಪ್ರಶ್ನಿಸಿದ.

ಆಗ ವಾಸುಕಿಯು “ಮಗೂ, ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ಬ್ರಹ್ಮಚಾರಿಯಾದ ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು” ಎಂದು ಸಲಹೆ ನೀಡಿದ. ಆಸ್ತಿಕ ತಡಮಾಡದೆ ಅಲ್ಲಿಂದ ಹೊರಟು ಯಾಗಶಾಲೆಯನ್ನು ತಲುಪಿದ. ಜನಮೇಜಯನ ಮುಂದೆ ಹೋಗಿ ನಿಂತ. ಇನ್ನೇನು ಮಂತ್ರಾಕರ್ಷಣೆಗೆ ಸಿಲುಕಿ ದೇವೇಂದ್ರ ಸಹಿತನಾಗಿ ತಕ್ಷಕ ಕುಂಡದಲ್ಲಿ ಬೀಳುವುದರಲ್ಲಿದ್ದ. ಆದರೆ ಅದಕ್ಕೆ ಅಡ್ಡಿಯಾಗಿ ನಿಂತ ಆಸ್ತಿಕ, “ಬ್ರಹ್ಮಚಾರಿಗೆ ದಕ್ಷಿಣೆ ಕೊಡದೆ ಯಾಗ ಹೇಗೆ ಮುನ್ನಡೆಸುತ್ತೀರಿ?” ಎಂದು ಜನಮೇಜಯನನ್ನು ಇಕ್ಕಟ್ಟಿಗೆ ಸಿಲುಕಿಸಿದ. ಜನಮೇಜಯ, “ಬ್ರಹ್ಮಚಾರಿ! ನಿನಗೇನು ಬೇಕು ಕೇಳು. ಕೊಡುತ್ತೇನೆ” ಎಂದು ವಾಗ್ದಾನ ನೀಡಿಬಿಟ್ಟ. ಇದಕ್ಕಾಗಿಯೇ ಕಾದಿದ್ದ ಆಸ್ತಿಕ “ಈಗಿಂದೀಗಲೇ ಸರ್ಪಯಾಗವನ್ನು ನಿಲ್ಲಿಸಿ. ಇದೇ ನೀವು ನನಗೆ ಕೊಡುವ ದಕ್ಷಿಣೆ!!” ಅಂದುಬಿಟ್ಟ.

ಮಾತಿಗೆ ಬದ್ಧನಾದ ಜನಮೇಜಯನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಏನೂ ಮಾಡುವಂತಿಲ್ಲ. ಆದರೂ ಆಸ್ತಿಕನಿಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. ದೇವೇಂದ್ರ ಅವನನ್ನು ಸಮಾಧಾನ ಪಡಿಸಿ, ಶೃಂಗಿಯ ಶಾಪವೇ ಕಾರಣವಾಗಿ ನಿನ್ನ ತಂದೆಯ ಮೃತ್ಯುವಾಯಿತು. ಇದರಲ್ಲಿ ತಕ್ಷಕನ ಪಾತ್ರವೇನೂ ಇಲ್ಲ. ಅವನು ನಿಮಿತ್ತ ಮಾತ್ರ ಎಂದು ಅನುನಯಿಸಿದ. ಇದರಿಂದ ಜನಮೇಜಯನೂ ದ್ವೇಷ ಕಳೆದು ಸಮಾಧಾನ ಹೊಂದಿದ.

ತಮ್ಮ ಸೋದರಳಿಯನ ಸಹಾಯಕ್ಕೆ ಕೃತಜ್ಞರಾದ ಸರ್ಪಗಳು “ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಬಾಧಿಸುವುದಿಲ್ಲ” ಎಂದು ವಾಗ್ದಾನ ನೀಡಿದವು. ಇಂದಿಗೂ ಕೆಲವು ಕಡೆಗಳಲ್ಲಿ ಬಹುತೇಖ ವೃದ್ಧರು ಹಾವನ್ನು ಕಂಡಕೂಡಲೇ “ಆಸ್ತಿಕ… ಆಸ್ತಿಕ…” ಎಂದು ಪಠಿಸುವುದು ಇದೇ ಕಾರಣಕ್ಕೆ. ಆಸ್ತಿಕನನ್ನು ಸ್ಮರಿಸಿದರೆ ಸರ್ಪ ತೊಂದರೆ ಕೊಡದೆ ಹೊರಟು ಹೋಗುತ್ತದೆ ಅನ್ನುವ ನಂಬಿಕೆಗೆ ಈ ಕಥೆಯೇ ಹಿನ್ನೆಲೆ.. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು 

೨.  ಪುರಾಣ ಕಥೆಯೊಂದರ ಪ್ರಕಾರ ಬಾಲ ಕೃಷ್ಣ ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದಾಗ ನದಿಯಲ್ಲಿ ಜಾರಿ ಬೀಳುತ್ತಾನೆ. ಕೃಷ್ಣ ನದಿಗೆ ಬಿದ್ದ ಸಂದರ್ಭದಲ್ಲಿ ಕಾಳಿಯಾ ಎಂಬ ಹಾವೊಂದು ಆತನ ಮೇಲೆ ದಾಳಿ ನಡೆಸುತ್ತದೆ. ಸ್ವತಃ ದೈವತ್ವದ ಸ್ವರೂಪಿಯಾಗಿದ್ದ ಶ್ರೀಕೃಷ್ಣ ಕಾಳಿಯಾನನ್ನು ಮಣಿಸುತ್ತಾನೆ. ಈತ ಸಾಮಾನ್ಯ ಮಗುವಲ್ಲ ಎಂಬುದನ್ನು ಅರಿತ ಕಾಳಿಯ ಹಾವು ತನ್ನನ್ನು ಬಿಟ್ಟುಬಿಡುವಂತೆ ಕೃಷ್ಣನಲ್ಲಿ ಬೇಡುತ್ತದೆ. ಆಗ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಪ್ರಮಾಣ ಪಡೆದು, ಶ್ರೀಕೃಷ್ಣ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗೆ ಕೃಷ್ಣನು ಕಾಳಿಯಾ ಹಾವನ್ನು ಸೋಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು 

೩. ಪುರಾಣ ಕತೆಯೊಂದರಲ್ಲಿ ಸತ್ಯೇಶ್ವರಿ ಎಂಬ ದೇವಿಯೊಬ್ಬಳು ನಾಗರಪಂಚಮಿಯ ಮುನ್ನಾದಿನ ಮೃತನಾದ ತನ್ನ ಸಹೋದರನನ್ನು ನೆನೆದು, ನಾಗರಪಂಚಮಿಯ ದಿನ ಅನ್ನ-ನೀರು ಬಿಟ್ಟು ಉಪವಾಸ ಮಾಡಿದ್ದಳಂತೆ, ಹೀಗಾಗಿ ಇಂದಿಗೂ ನಾಗರ ಪಂಚಮಿಯ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ. 

ವೈಜ್ಞಾನಿಕ ಹಿನ್ನಲೆಯುಳ್ಳ ಪರಿಸರಸ್ನೇಹಿ ಹಬ್ಬ – ನಾಗಾರಾಧನೆ ಎಂಬುದು ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗ ದೇವರ ಪ್ರಾಮುಖ್ಯತೆ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಋಷಿಮುನಿಗಳ ಕಾಲದಲ್ಲಿ ದೇವತೆ -ಗಂಧರ್ವ- ಯಕ್ಷ – ಕಿನ್ನರ -ಕಿಂಪುರುಷ- ನಾಗರಾದಿಯಾಗಿ ಎಲ್ಲರೊಳಗೂ ನಿಕಟ ಸಂಪರ್ಕವಿತ್ತು, ಮನುಷ್ಯನ ಮನಸ್ಸು ಕಿರಿದಾಗತೊಡಗಿದಾಗ ಸಂಪರ್ಕದ ಕೊಂಡಿಕಳಚಿ ಬಿದ್ದು, ಎಲ್ಲವೂ ಅಲೌಕಿಕ ಪಥಕ್ಕೆ ಸೇರಿಹೋಯಿತು ಎಂದು ನಂಬುತ್ತಾರೆ. ಹೀಗಾಗಿಯೇ  ಪ್ರಕೃತಿಯ ಶಕ್ತಿಗಳನ್ನೇ ಸಾಂಕೇತಿಕವಾಗಿ ಆರಾಧಿಸತೊಡಗಿದ. ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ ‘ನಾಗದೇವತೆ’ ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, “ಮೆಟ್ಟಿದಲ್ಲದೇ ಹಾವು ಕಚ್ಚದು” ಎಂಬ ಮಾತು ಕೇಳಿದ್ದಿರಲ್ಲವೇ? ಹಾವು ಎಂಬುದು ಹುಟ್ಟು, ಸಾವು – ಪುನರ್ಜನ್ಮದ ಸಂಕೇತ. ಹೀಗಾಗಿಯೇ ಆಗಾಗ ತನ್ನ ಪೊರೆಯನ್ನು ಕಳಚಿ ಹೊಸ ಜನ್ಮವನ್ನು ಪಡೆಯುತ್ತದೆ. ನಮ್ಮ ಹಿಂದೂ ಧರ್ಮವೂ ಇದನ್ನೇ ಪ್ರತಿಪಾದಿಸುತ್ತದೆ. ಶ್ರಾವಣಮಾಸ ಎಂದರೆ ಮಳೆ ಬೀಳುವ ಸಮಯ, ಈ ಸಮಯದಲ್ಲಿ ಸರ್ಪಗಳ ಬಿಲಗಳಲ್ಲಿ ನೀರುತುಂಬುತ್ತವೆ. ಆದ್ದರಿಂದ ಸರ್ಪಗಳು ಬಿಲದಿಂದ ಹೊರಬರುತ್ತವೆ, ಹೊಲಗದ್ದೆಗಳಲ್ಲಿ ಸುತ್ತಾಡುತ್ತವೆ. ಫಸಲು ಹಾಳುಮಾಡುವ ಜಂತುಗಳನ್ನು ತಿಂದು ಫಸಲು ಹಾಳಾಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಾಗಪೂಜೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ಹಬ್ಬಗಳು ಸಂಬಂಧವನ್ನು ಬೆಸೆಯುವುದಷ್ಟೇ ಅಲ್ಲದೇ,ಭಕ್ತಿಯ ಪಥದೊಳು ಸಾಗಲು ಅನುವು ಮಾಡಿ ಕೊಡುವ ವಿಶೇಷ ಸಾಂಸ್ಕೃತಿಕ ಅವಕಾಶಗಳಾಗಿವೆ. ಮಗದೊಮ್ಮೆ ತಮ್ಮೆಲ್ಲರಿಗೂ “ನಾಗರ ಪಂಚಮಿಯ” ಹಾರ್ದಿಕ ಶುಭಾಶಯಗಳು. 

Image attribution: https://www.freepik.com/vectors/watercolor”>Watercolor vector created by freepik – www.freepik.com

Apply Now