ಆತ್ಮತರ್ಪಣಗೈದ ಸರದಾರರಿಗೆ ನಮ್ಮ ಪ್ರಣಾಮ.

ಮಾನವಶಕ್ತಿಯು ಒಕ್ಕೂಟಗೊಳ್ಳದಿದ್ದರೆ, ಅದು ಬಲಿಷ್ಠತೆಯೆಂದೆನಿಸುವುದಿಲ್ಲ. ಕಾರಣ, ಅದನ್ನೇ ಸರಿಯಾಗಿ ಒಗ್ಗೂಡಿಸಿ ಸಾಮರಸ್ಯಗೊಳಿಸಿದಲ್ಲಿ ಆಧ್ಯಾತ್ಮಿಕಕ್ಷಮತೆಯಾಗಬಲ್ಲದು

By Someshwar Gurumath, Rashtram Learner

”ಮಾನವಶಕ್ತಿಯು ಒಕ್ಕೂಟಗೊಳ್ಳದಿದ್ದರೆ, ಅದು ಬಲಿಷ್ಠತೆಯೆಂದೆನಿಸುವುದಿಲ್ಲ. ಕಾರಣ, ಅದನ್ನೇ ಸರಿಯಾಗಿ ಒಗ್ಗೂಡಿಸಿ ಸಾಮರಸ್ಯಗೊಳಿಸಿದಲ್ಲಿ ಆಧ್ಯಾತ್ಮಿಕ ಕ್ಷಮತೆಯಾಗಬಲ್ಲದು” ಎಂದು ಹೇಳಿದ ”ಶ್ರೀ ಸರದಾರ್ ವಲ್ಲಭಭಾಯಿ ಪಟೇಲರ” ೧೪೬ನೇ ಜನ್ಮ ವಾರ್ಷಿಕೋತ್ಸವವನ್ನು ನಾವಿಂದು ಆಚರಿಸುತ್ತಿದ್ದೇವೆ. ಸ್ವತಂತ್ರಪೂರ್ವ ಭಾರತದ ಸನ್ನಿವೇಶವನ್ನೊಮ್ಮೆ ಐತಿಹಾಸಿಕ ಪುಟಗಳನ್ನು ತಿರುವುತ್ತಾ ಗಮನಿಸಿದ್ದೇ ಆದರೆ, ೫೬೦ ಸಂಸ್ಥಾನಗಳಾಗಿ ವಿಘಟಿತಗೊಂಡಿದ್ದ ಭಾರತವನ್ನು ಸಂಘಟಿತಗೊಳಿಸಿ ಏಕೀಕರಣಗೊಳಿಸುವ ಪ್ರಕ್ರಿಯೆ ಸುಲಭವಾಗಿರಲಿಲ್ಲ. ಭಾರತವೆಂಬ ಅಖಂಡ ವೃಕ್ಷದಡಿಯಲ್ಲಿ ಬೆಳೆದ ಇತರೆ ಬೇರುಗಳ ಮೂಲವನ್ನು ಸಂಗ್ರಹಿಸಿ ಒಗ್ಗೂಡಿಸುವಲ್ಲಿ ಸರದಾರರು  ನಿರ್ಣಾಯಕ ಪಾತ್ರ ವಹಿಸಿದರು.  ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಸ್ವತಂತ್ರ ಭಾರತದ ಗೃಹ ಸಚಿವರೂ ಆಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತವನ್ನು ಒಂದುಗೂಡಿಸಲು ಮಾಡಿದ ಪ್ರಯತ್ನಗಳನ್ನು ಅಂಗೀಕರಿಸುವ ದಿನವನ್ನು ರಾಷ್ಟ್ರೀಯ ಏಕತೆ ದಿನವೆಂದು  ಆಚರಿಸಲಾಗುತ್ತದೆ. 

ಸರ್ದಾರ್ ವಲ್ಲಭಭಾಯ್ ಪಟೇಲರ ಪೂರ್ಣನಾಮ ವಲ್ಲಭಭಾಯ್ ಜವೇರಭಾಯ್ ಪಟೇಲ್. ಇವರು ೧೮೭೫ ಅಕ್ಟೋಬರ್ ೩೧ರಂದು  ಗುಜರಾತ್ನ ನಾಡಿಯಾಡಿನಲ್ಲಿ ಜನಿಸಿದರು. ಕರಮ್ಸಾದ್ ನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪೆಟ್ಲಾಡ್ ನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ ಇವರು ತಮ್ಮ೨೨ನೇಯ ವಯಸ್ಸಿನಲ್ಲೇ   ಮೆಟ್ರಿಕ್ಯುಲೇಟ್ ಆಗಿ ಜಿಲ್ಲಾ ನ್ಯಾಯವಾದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದರಿಂದಾಗಿ ಅವರು ಕಾನೂನು ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.  ೧೯೦೦ರಲ್ಲಿ ಗೋದ್ರಾದಲ್ಲಿ ಅವರು ಸ್ವತಂತ್ರ ಜಿಲ್ಲಾ ನ್ಯಾಯವಾದಿ ಕಚೇರಿಯನ್ನು ಸ್ಥಾಪಿಸಿದರು. ಅದಾದ ಒಂದು ದಶಕದ ನಂತರದಲ್ಲಿ ೧೯೧೦ರಲ್ಲಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳಿದರು. ಅಲ್ಲಿನ ೩೬ ತಿಂಗಳುಗಳ ಅಧ್ಯಯನವನ್ನು ೩೦ ತಿಂಗಳಲ್ಲೇ  ಮುಗಿಸಿದರು. ಆನಂತರ ೧೯೧೩ರಲ್ಲಿ ಭಾರತಕ್ಕೆ ಮರಳಿ ಅಹಮದಾಬಾದ್ ನಲ್ಲಿ ನೆಲೆಸಿದರು.   ಅಹ್ಮದಾಬಾದ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕಾನೂನಿನ ಬ್ಯಾರಿಸ್ಟರ್ ಆಗಿ ಕಾರ್ಯನಿರ್ವಹಿಸಿದರು. ೧೯೧೭ರಿಂದ ೧೯೨೪ರ ತನಕ ಪಟೇಲ್ ಅವರು ಅಹ್ಮದಾಬಾದ್ ನಲ್ಲಿ ಭಾರತದ ಮೊದಲ ಪಾಲಿಕೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದರು ಮತ್ತು ೧೯೨೪ರಿಂದ ೧೯೨೮ರ ತನಕ  ಪಾಲಿಕೆಯ ಅಧ್ಯಕ್ಷ ಸ್ಥಾನ್ನವನ್ನಲಂಕರಿಸಿದ್ದರು.  

ಸ್ವಾತಂತ್ರ್ಯ ಹೋರಾಟಗಾರರಾಗಿ ಸರದಾರ ಪಟೇಲರು –  ಮೂಲತಃ ಗುಜರಾತಿನ ನಿವಾಸಿಯಾದ  ವಲ್ಲಭಬಾಯಿಯವರು ಪ್ರಪ್ರಥಮವಾಗಿ ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ಮದ್ಯಸೇವನೆ, ಅಸ್ಪೃಶ್ಯತೆಯ ವಿರುದ್ಧ ಧ್ವನಿಯೆತ್ತಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಆನಂತರ ಮಹಿಳೆಯರ ದೌರ್ಜನ್ಯದ ವಿರುದ್ಧ ಸಾಕಷ್ಟು ಹೋರಾಡಿದರು. ಜೊತೆಯಲ್ಲೇ  ಹಿಂದೂ ಮುಸ್ಲಿಂ ಐಕ್ಯತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. 

ಖೇಡಾ ಚಳುವಳಿ: ೧೯೧೭   ರಲ್ಲಿ ಗಾಂಧೀಜಿಯವರು  ವಲ್ಲಭಭಾಯಿ ಪಟೇಲರಿಗೆ ಖೇಡಾದ ರೈತವರ್ಗವನ್ನು ಸಜ್ಜುಗೊಳಿಸಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತಲು ಪ್ರೇರೇಪಿಸುವಂತೆ ಕೇಳಿಕೊಂಡರು. ಅಂದಿನ ದಿನಗಳಲ್ಲಿ ನಿಜವಾಗಿಯೂ “ಭಾರತದ ಆರ್ಥಿಕ ಬೆನ್ನೆಲುಬಾಗಿದ್ದ ಕೃಷಿಯು” ಅತಿ ದೊಡ್ಡ ಆದಾಯದ ಮೂಲವಾಗಿತ್ತು, ಆದರೆ ನಿಸ್ಸಂಶಯವಾಗಿ ಕೃಷಿಯೆಂದಿಗೂ ಪ್ರಕೃತಿಯನ್ನೇ  ಅವಲಂಬಿಸಿದೆ. ಒಂದೆಡೆ ಅತೀವೃಷ್ಟಿ ಮತ್ತು ಕ್ಷಾಮದಿಂದ ಬೆಳೆಹಾನಿಯಾಗಿ ಕಂಗಾಲಾಗಿದ್ದ ರೈತವರ್ಗಕ್ಕೆ , ಮತ್ತೊಂದೆಡೆ ಬೆಲೆ ಏರಿಕೆಯ ಜೊತೆಗೆ ತೆರಿಗೆಯ ಬರೆಯನ್ನು ಎಳೆಯಲು ಮುಂದಾದ ಬ್ರಿಟಿಷ್ ಸರ್ಕಾರದ ನಿಲುವನ್ನು ವಿರೋಧಿಸಿ ಗಾಂಧೀಜಿ ಆರಂಭಿಸಿದ್ದ ಆಂದೋಲನಕ್ಕೆ  ಸರ್ದಾರ್ ಪಟೇಲರು ಬೆನ್ನುಲುಬಾಗಿ ನಿಂತಿದ್ದರು. 

ಸರದಾರರು ಗಾಂಧೀಜಿಯವರ ವಿಚಾರಗಳಿಂದ ಎಷ್ಟು ಪ್ರಭಾವಿತರಾಗಿದ್ದರೆಂದರೆ ಅವರ ಪ್ರತೀ ಚಳುವಳಿಯನ್ನು ಸಹ  ಬೆಂಬಲಿಸಿದರು. ಇಂಗ್ಲೆಂಡಿನಿಂದ ಮರಳಿದಾಗ ಅಲ್ಲಿನ ಶಿಕ್ಷಿತ ಸಮಾಜದಂತೆ ತಮ್ಮ ಮಕ್ಕಳಿಗೂ ಶಿಕ್ಷಣದ ಜೊತೆಗೆ  ‘ಸೂಟು, ಬೂಟನ್ನು,’ ಕೊಡಿಸಬೇಕೆಂದು ಆಲೋಚಿಸಿದ್ದರಂತೆ. ಆನಂತರ ಸ್ವದೇಶೀ ಆಂದೋಲನದ ವಿಚಾರಗಳಿಂದ ಪ್ರಭಾವಿತರಾಗಿ ಇಂಗ್ಲಿಷ್ ಬಟ್ಟೆಗಳನ್ನು ಬಹಿಷ್ಕರಿಸಿ ಖಾದಿಯನ್ನು ಅಳವಡಿಸಿಕೊಂಡರು. ೧೯೨೮ರಲ್ಲಿ ಅವರು ಬರ್ಡೊಲಿ ಚಳವಳಿಯನ್ನು ಯಶಸ್ವಿಯಾಗಿ ಆಯೋಜಿಸಿ ನಿರ್ವಹಿಸಿದ ಕಾರಣಾರ್ಥವಾಗಿ ಜನರು ಅವರಿಗೆ  “ಸರ್ದಾರ್” ಎಂದು ಬಿರುದು ನೀಡಿದರು. ಸರ್ದಾರ್ ಎಂದರೆ ‘ನಾಯಕ’  ಎಂದಾಗಿದೆ.  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಲಾಹೋರ್ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿ ಅವರ ಬಳಿಕ ಅಧ್ಯಕ್ಷರಾಗಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಎರಡನೇ ಅಭ್ಯರ್ಥಿಯಾಗಿದ್ದರು. ೧೯೩೧ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕರಾಚಿ ಅಧಿವೇಶನದಲ್ಲಿ ಅವರು ಅಧ್ಯಕ್ಷರಾದರು. ಪಟೇಲ್ ಅವರು ಜಾವೇರಿಭಾಯಿ ದಜಿಭಾಯ್ ಪಟೇಲ್ ಹೈಸ್ಕೂಲ್ (ಈಗ ಎಡ್ವರ್ಡ್ ಸ್ಮಾರಕ ಹೈಸ್ಕೂಲ್ ಬೊರಸದ್)ನ ಸ್ಥಾಪಕ ಹಾಗೂ ಮೊದಲ ಕಾರ್ಯಾಧ್ಯಕ್ಷರಾಗಿದ್ದರು. ಸ್ವಾತಂತ್ಯ ಸಿಕ್ಕ ನಂತರ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇವರು ಸುಮಾರು ಐನೂರಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರಕಾರದ ಸುಪರ್ದಿಗೆ ತಂದರು. ಈ ರೀತಿಯಾಗಿ ಭಾರತದ ಏಕೀಕರಣಕ್ಕಾಗಿ ಜೀವನವಿಡೀ ಶ್ರಮಿಸಿದರು. ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಜತೆಯಾಗಿ ಬದುಕುವಂತೆ ಜನರಿಗೆ ಕರೆ ನೀಡಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿಕ್ರಮಗಳ ಬರದೇ ಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮವನ್ನು ನಾವು ಸ್ಮರಿಸಲೇಬೇಕು.

ಭಾರತ ವೈವಿಧ್ಯತೆ ಹೊಂದಿರುವ ದೇಶ, ಇಲ್ಲಿನ ಧರ್ಮ, ಸಂಸ್ಕೃತಿ, ಸಂಪ್ರದಾಯ, ಭಾಷೆಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ವಿವಿಧತೆಯಲ್ಲಿ ಏಕತೆ ಹಾಗೂ  ಒಗ್ಗಟ್ಟು ಕಾಪಾಡಿಕೊಂಡು ಹೋಗುವುದು ದೇಶದ ಅಭಿವೃದ್ಧಿಗೆ ಮುಖ್ಯವಾಗಿದೆ. ಹೇಗೆ  ಸರ್ದಾರ್ ಪಟೇಲರು ರಾಷ್ಟ್ರದ ಐಕ್ಯತೆಗೆ ಶ್ರಮಿಸಿದ್ದರು ಎಂಬುದರ ಕುರಿತು ಇಂದಿನ  ಜನಾಂಗದವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾರತೀಯ ಸರ್ಕಾರ ಈ ದಿನವನ್ನು ಆಚರಿಸುತ್ತಿದೆ. ೨೦೧೮ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿ ಸರ್ದಾರ ಅಣೆಕಟ್ಟಿನ ಎದುರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ(೫೯೭ ಅಡಿ)ಯನ್ನು ಉದ್ಘಾಟಿಸಿದ್ದರು. ಅದಾದ ಒಂದು ವರ್ಷದಲ್ಲೇ ೩೭೦ನೇ ವಿಧಿಯನ್ನು ರದ್ದುಗೊಳಿಸುವುದರ  ಮೂಲಕ ‘ಭಾರತಮಾತೆಯ ಮುಕುಟವನ್ನು’ ಆಕೆಗೆ ಮರಳಿಸಿದಂತಾಗಿತ್ತು. ಆದರೆ ಒಂದೆಡೆ ಕೇಳಿ ಬರುತ್ತಿರುವ ‘ಖಲಿಸ್ಥಾನದ’ ಸದ್ದು, ಕಾಶ್ಮೀರಕ್ಕೆ ಪುನರ್ಮರಳಿ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿದ್ದ ಮೂಲನಿವಾಸಿಗರ ಮೇಲಿನ ಕರಿನೆರಳ ಆಕ್ರಂದನ,  ಸರದಾರರನಂತರ ಪ್ರತ್ಯೇಕಗೊಂಡ ಪೂರ್ವಪಾಕಿಸ್ತಾನದ ಅಲ್ಪಸಂಖ್ಯಾತರ ಕೂಗು, ಭಾಷೆ ಮೊದಲೋ ಭಾರತ ಮೊದಲೋ? ಎನ್ನುವ ಪ್ರಶ್ನೆಗಳಿಗೆ ಆದಷ್ಟು ಬೇಗ ಉತ್ತರ ಕಂಡುಕೊಳ್ಳಬೇಕಾಗಿದೆ. ಆ ತೀಕ್ಷ್ಣ ಉತ್ತರಗಳೇ ಸ್ವತಂತ್ರ ಭಾರತದ ಅಖಂಡತೆಯ ಸಾಕಾರಕೆ ಆತ್ಮತರ್ಪಣಗೈದ ಸರದಾರರಿಗೆ ನಾವು ಸಲ್ಲಿಸುವ ಪ್ರಣಾಮವಾಗಲಿವೆ. 

ವಿಷಯ ಸಂಗ್ರಹಣಾ ಮೂಲಗಳು

೧ ಜನಮನ.ಇನ್ 

೨ ಸ್ಪರ್ಧಾ ಟೈಮ್ಸ್ 

೩. ಕನ್ನಡಬೋಲ್ಡ್ಸ್ಕ್ಯ್.ಕಂ